ರೇಡಿಯೊ ಚಿಕಿತ್ಸೆ - 
ವಿಕಿರಣಾಕರಗಳ ಬಳಕೆಯಿಂದ ಮಾಡುವ ರೋಗಚಿಕಿತ್ಸೆ (ರೇಡಿಯೊ ತೆರಪಿ). ವ್ಯಾವಹಾರಿಕವಾಗಿ, ದೇಹದ ನಿರ್ದಿಷ್ಟ ಭಾಗವನ್ನು ಅಯಾನೀಕರಿಸುವ ವಿಕಿರಣಕ್ಕೆ ಅಥವಾ ಊತಕಗಳ ಆಳಕ್ಕೆ ಇಳಿಯಬಲ್ಲ ಕಿರಣಗಳಿಗೆ ಒಡ್ಡಿ ರೋಗಯುಕ್ತ ಕೋಶಗಳನ್ನು ನಾಶಮಾಡುವ ಚಿಕಿತ್ಸೆ ಇದು. ವಿಕಿರಣಪಟು ಸಮಸ್ಥಾನಿಗಳು ಅಥವಾ ಕೃತಕವಾಗಿ ಉತ್ಪಾದಿಸಿದ ಎಕ್ಸ್‍ಕಿರಣಗಳು ವಿಕಿರಣದ ಆಕರಗಳು. ಕೆಲವು ಬಗೆಯ ಕ್ಯಾನ್ಸರ್‍ಗಳನ್ನು ಗುಣಪಡಿಸಲು, ಶಸ್ತ್ರಕ್ರಿಯಾನಂತರ ಕ್ಯಾನ್ಸರ್ ಮರುಕಳಿಸುವುದನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ಲಕ್ಷಣಗಳನ್ನು ನಿವಾರಿಸಲು ಈ ಚಿಕಿತ್ಸೆಯ ಬಳಕೆ ಉಂಟು. ರೇಡಿಯೊಚಿಕಿತ್ಸೆಯಲ್ಲಿ ಎರಡು ಬಗೆ: ಬಾಹ್ಯ ಅಥವಾ ದೂರ ಮತ್ತು ಆಂತರಿಕ.

ಕ್ಯಾನ್ಸರ್ ಕೋಶಗಳನ್ನು ನಾಶಗೊಳಿಸುವುದು ಈ ಚಿಕಿತ್ಸೆಯ ಪ್ರಧಾನ ಉದ್ದೇಶ. ವಾಸ್ತವವಾಗಿ ಕ್ಯಾನ್ಸರ್ ಗಂತಿಯ ನಾಶದಿಂದ ರೋಗವನ್ನು ನಿರ್ಮೂಲಿಸುವ ಪ್ರಯತ್ನವಿದು. ಶಸ್ತ್ರಕ್ರಿಯೆ ಅಥವಾ ರಾಸಾಯನಿಕ ಚಿಕಿತ್ಸೆಗೆ ಮುನ್ನ ಅಥವಾ ಅನಂತರ ಈ ಚಿಕಿತ್ಸೆ ಮಾಡಬಹುದು. ಕೆಲವೊಮ್ಮೆ ರಾಸಾಯನಿಕ ಮತ್ತು ರೇಡಿಯೊ ಚಿಕಿತ್ಸೆಗಳೆರಡನ್ನೂ ನೀಡುವುದುಂಟು. ಕ್ಯಾನ್ಸರ್ ವಾಸಿಯಾಗುವ ಹಂತ ಮೀರಿದ್ದರೂ ನೋವು ಮುಂತಾದ ಬಾಧೆ ಕಡಿಮೆ ಮಾಡಲು ಈ ಚಿಕಿತ್ಸೆ ಉಪಯುಕ್ತ. ಲ್ಯೂಕೀಮಿಯ ರೋಗಚಿಕಿತ್ಸೆಗಾಗಿ ಕಾಂಡ ಕೋಶ (ಸ್ಟೆಮ್ ಸೆಲ್) ಮತ್ತು ಅಸ್ಥಿಮಜ್ಜೆ ನಾಟಿ ಮಾಡಿಸಿಕೊಂಡ ರೋಗಿಗಳ ಸಂಪೂರ್ಣ ದೇಹವನ್ನು ವಿಕಿರಣಕ್ಕೆ ಒಡ್ಡುವುದೂ ಉಂಟು.

ಹೊರರೋಗಿಯಾಗಿ ಬಾಹ್ಯ ರೇಡಿಯೊ ಚಿಕಿತ್ಸೆ ಪಡೆಯಬಹುದೇ ಎಂಬುದು ರೋಗಿಯ ಸ್ಥಿತಿ ಮತ್ತು ಒಟ್ಟಾರೆ ಚಿಕಿತ್ಸಾ ಕ್ರಮವನ್ನು ಅವಲಂಬಿಸಿದೆ. ಆಂತರಿಕ ರೇಡಿಯೊಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಬೇಕಾದದ್ದು ಅನಿವಾರ್ಯ. ಬಾಹ್ಯ ರೇಡಿಯೊಚಿಕಿತ್ಸಾ ಕ್ರಮದಲ್ಲಿ ಚಿಕಿತ್ಸೆ ಸಾಮಾನ್ಯ ವಾಗಿ 10-15 ಮಿನಿಟ್ ಅವಧಿಯ ಕಿರು ದೈನಿಕಚಿಕಿತ್ಸಾ ಶ್ರೇಣಿ ಯಾಗಿರುತ್ತದೆ. ಎಷ್ಟು ದಿನ ಚಿಕಿತ್ಸೆ ನೀಡಬೇಕೆಂಬುದು ರೋಗಿಯ ಸಾಮಾನ್ಯ ಆರೋಗ್ಯ ಸ್ಥಿತಿ, ಕ್ಯಾನ್ಸರಿನ ಪ್ರಭೇದ, ಚಿಕಿತ್ಸೆಗೆ ಒಳಪಡಿಸಬೇಕಾದ ದೇಹಭಾಗ ಮತ್ತು ಒಟ್ಟಾರೆ ಚಿಕಿತ್ಸೆಯ ಸ್ವರೂಪ ಇವನ್ನು ಆಧರಿಸಿದೆ.
ಸಮಕೇಂದ್ರಿಕ ಆವರ್ತನೆಗೆಂದೇ (ಐಸೊಸೆಂಟ್ರಿಕ್ ರೊಟೇಷನ್) ವಿನ್ಯಾಸಗೊಳಿಸಲಾದ ಛದ್ಮಕ (ಸಿಮ್ಯುಲೇಟರ್) ಎಂಬ ವಿಶಿಷ್ಟ ಉಪಕರಣ ಬಳಸಿ ವಿಕಿರಣ ಉದ್ದೇಶಿತ ಸ್ಥಳಕ್ಕೆ ಮಾತ್ರ ಬೀಳುವುದನ್ನು ಖಚಿತಪಡಿಸಿಕೊಂಡ ಬಳಿಕ ಚಿಕಿತ್ಸೆ ಆರಂಭ. ಬಹುತೇಕ ಸಂದರ್ಭಗಳಲ್ಲಿ ಗಂತಿಯ ವಿಕಿರಣನಕ್ಕೆ (ಇರ್ರೇಡಿಯೇಶನ್) ಫೋಟಾನ್ ದೂಲದ ಬಳಕೆ ಇದೆ. ಕ್ಯಾನ್ಸರಿನ ಸ್ವರೂಪ ಮತ್ತು ಚಿಕಿತ್ಸಾವಿಧಾನಕ್ಕೆ ತಕ್ಕುದಾದ ವೋಲ್ಟೇಜ್ ಆಕರದ ಬಳಕೆಯೂ ಉಂಟು. ವಿಕಿರಣ ಕಿರಣೋತ್ಪಾದಕಗಳಾಗಿ ಕೋಬಾಲ್ಟ್ ಯಂತ್ರ ಮತ್ತು ರೇಖೀಯ ವೇಗೋತ್ಕರ್ಷಕಗಳ ವ್ಯಾಪಕ ಬಳಕೆ ಇದೆ. ರೇಡಿಯಮ್, ರೇಡಾನ್, ವಿಕಿರಣಪಟು ಸಮಸ್ಥಾನಿಗಳು (ಉದಾ: ಸೀಸಿಯಮ್, ಕೋಬಾಲ್ಟ್, ಚಿನ್ನ, ಇರಿಡಿಯಮ್, ಟ್ಯಾಂಟಲಮ್ ಲೋಹಗಳ ವಿಕಿರಣಪಟು ಸಮಸ್ಥಾನಿಗಳು) ಮುಂತಾದವುಗಳ ಪೈಕಿ ಯುಕ್ತವಾದದ್ದು ವಿಕಿರಣಾಕರ.

ಕ್ಯಾನ್ಸರ್ ಕೋಶಗಳನ್ನು ರೇಡಿಯೊಚಿಕಿತ್ಸೆ ನಾಶಪಡಿಸುವುದರ ಜೊತೆಗೆ ಆಸುಪಾಸಿನ ಸಾಧಾರಣಕೋಶಗಳ (ನಾರ್ಮಲ್ ಸೆಲ್ಸ್) ಮೇಲೂ ಚಿಕಿತ್ಸೆಯ ಪಾಶ್ರ್ವ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಇವುಗಳ ತೀವ್ರತೆ ಮತ್ತು ಸ್ವರೂಪದಲ್ಲಿ ವ್ಯಷ್ಟಿವ್ಯತ್ಯಾಸಗಳುಂಟು. ಕೆಲವು ಚಿಕಿತ್ಸೆ ಪೂರ್ಣಗೊಂಡೊಡನೆ ಮಾಯವಾಗುತ್ತವೆ, ಕೆಲವು ಚಿಕಿತ್ಸಾನಂತರವೂ ಕೆಲವಾರಗಳ ಕಾಲ ಮುಂದುವರಿಯುತ್ತವೆ. ಆಯಾಸ, ಹಸಿವಾಗದಿರುವಿಕೆ, ತೂಕ ಇಳಿಕೆ, ರಕ್ತದ ಘಟಕ ಕೋಶಗಳ ಕೊರತೆ ಮತ್ತು ತತ್ಪರಿಣಾಮವಾಗಿ ದೇಹತಾಪ ಏರಿಕೆ ಅಥವಾ ಚಳಿ, ಚಿಕಿತ್ಸೆಗೊಳಪಟ್ಟ ದೇಹಭಾಗದ ಚರ್ಮದಲ್ಲಿ ನವೆ, ಚರ್ಮ ಕಪ್ಪಾಗುವಿಕೆ, ಬಿಸಿಲು ಅಥವಾ ಶೀತಗಾಳಿಗೆ ಅತಿಸಂವೇದಿತ್ವ ಇವು ಸಾಮಾನ್ಯ ಪಾಶ್ರ್ವಪರಿಣಾಮಗಳು. ಚಿಕಿತ್ಸೆಗೊಳಗಾದ ಭಾಗವನ್ನಾಧರಿಸಿದ ಪಾಶ್ರ್ವಪರಿಣಾಮಗಳೂ ಇವೆ. ಉದಾ: ತಲೆ ಅಥವಾ ಕುತ್ತಿಗೆ - ದಂತಸಂಬಂಧಿತ ತೊಂದರೆಗಳು; ಎದೆ - ಆಹಾರ ನುಂಗಲು ಹಾಗೂ ಉಸಿರಾಡಲು ಕಷ್ಟವಾಗುವುದು, ವಾಂತಿ, ತೂಕ ಇಳಿಕೆ; ಜಠರ ಅಥವಾ ವಸ್ತಿಕುಹರ - ಅತಿಸಾರ, ಗುದನಾಳದಲ್ಲಿ ತೊಂದರೆ, ಓಕರಿಕೆ ಅಥವಾ ವಾಂತಿ, ಹಸಿವಾಗದಿರುವುದು, ತೂಕ ಇಳಿಕೆ, ಮೂತ್ರವಿಸರ್ಜಿಸುವಾಗ ನೋವು.

ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿ ಪಾಶ್ರ್ವಪರಿಣಾಮ ಗಳನ್ನು ಕಡಿಮೆ ಮಾಡಲು ಬಾಹ್ಯ ರೇಡಿಯೊಚಿಕಿತ್ಸೆಯಲ್ಲಿ ನೂತನ ತಂತ್ರಗಳನ್ನು ಪರೀಕ್ಷಿಸಲಾಗುತ್ತಿದೆ. ಅವುಗಳ ಪೈಕಿ ಪ್ರಧಾನವಾದವುಗಳ ಸಂಕ್ಷಿಪ್ತ ವಿವರಣೆ ಮಾತ್ರ ಮುಂದೆ ನೀಡಿದೆ.

ಅನುರೂಪ್ಯ (ಕನ್‍ಫಾರ್ಮಲ್) ರೇಡಿಯೊಚಿಕಿತ್ಸೆ: ಪ್ರಸಾಮಾನ್ಯ ರೇಡಿಯೊಚಿಕಿತ್ಸೆಯಲ್ಲಿ ಉಪಯೋಗಿಸುವ ರೇಖೀಯ ವೇಗೋತ್ಕರ್ಷಕ ದಿಂದ ಹೊಮ್ಮುವ ಎಕ್ಸ್‍ಕಿರಣ ದೂಲದ ಹಾದಿಯಲ್ಲಿ ಲೋಹದ ಇಟ್ಟಿಗೆಗಳನ್ನಿಟ್ಟು ಅದರ ಆಕಾರ ಕ್ಯಾನ್ಸರ್ ಗಂತಿಯದ್ದನ್ನು ಹೋಲುವಂತೆ ಮಾಡುವ ಪ್ರಯತ್ನ ಇದು. ತತ್ಪರಿಣಾಮವಾಗಿ ಗಂತಿಯ ಮೇಲೆ ಮಾತ್ರ ಉಚ್ಚ ಗುಟ್ಟಿಪ್ರಮಾಣದ (ಡೋಸೇಜ್) ವಿಕಿರಣ ಬೀಳುತ್ತದೆ. ಆಸುಪಾಸಿನ ಪ್ರಸಾಮಾನ್ಯ ಕೋಶಗಳಿಗೆ ಆಗುವ ಹಾನಿಯ ಪ್ರಮಾಣ ಕಡಿಮೆ ಆಗುತ್ತದೆ. ಈ ಉದ್ದೇಶಕ್ಕಾಗಿಯೇ ಬಹು-ಪತ್ರ ಸಮಾಂತರಣಕ (ಮಲ್ಟಿಲೀಫ್ ಕಾಲಿಮೇಟರ್) ಎಂಬ ಉಪಕರಣವನ್ನು ರೂಪಿಸಲಾಗಿದೆ. ಕೊಂಚ ಸರಿಸಬಹುದಾದ ಲೋಹದ ಹಾಳೆಗಳುಳ್ಳ ರೇಖೀಯ ವೇಗೋತ್ಕರ್ಷಕವಿದು.

ತೀವ್ರತೆ ಮಾಡ್ಯುಲಿತ (ಇಂಟಿನ್ಸಿಟಿ ಮಾಡ್ಯುಲೇಟೆಡ್) ರೇಡಿಯೊಚಿಕಿತ್ಸೆ: ಬಹು-ಪತ್ರ ಸಮಾಂತರಣಕವನ್ನೇ ಉಪಯೋಗಿಸುವ ಚಿಕಿತ್ಸಾಕ್ರಮ ಇದಾಗಿದ್ದರೂ ಚಿಕಿತ್ಸಾವಧಿಯಲ್ಲಿ ಲೋಹಹಾಳೆಗಳನ್ನು ಯುಕ್ತರೀತಿಯಲ್ಲಿ ಸರಿಸಿ ಗಂತಿಯ ಎಲ್ಲ ಭಾಗಗಳಿಗೆ ಲಭಿಸುವ ವಿಕಿರಣದ ಗುಟ್ಟಿಪ್ರಮಾಣ ಸ್ಥಿರವಾಗಿರುವಂತೆ ಮಾಡಲಾಗುತ್ತದೆ.

ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಚಿಕಿತ್ಸೆ: ಸಾಮಾನ್ಯವಾಗಿ ಮಿದುಳು ಗಂತಿ ನಾಶಪಡಿಸಲು ಬಳಸುವ ಈ ಚಿಕಿತ್ಸಾವಿಧಾನದಲ್ಲಿ ವಿಭಿನ್ನಕೋನಗ ಳಿಂದ ಪ್ರಯೋಗಿಸುವ ವಿಕಿರಣ ದೂಲಗಳು ಗಂತಿಯ ಮೇಲೆ ಕೇಂದ್ರೀಕೃತವಾಗುತ್ತವೆ. ಆಸುಪಾಸಿನ ಕೋಶಗಳಿಗೆ ಹಾನಿಯಾಗದಂತೆ ಮಾಡುವ ಪ್ರಯತ್ನ ಇದು. 

ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಶಸ್ತ್ರಕ್ರಿಯೆ ಅಥವಾ ಗ್ಯಾಮ ಚೂರಿ: ಸಾಮಾನ್ಯವಾಗಿ ಮಿದುಳು ಗಂತಿ ನಾಶಪಡಿಸಲು ಬಳಸುವ ಈ ಚಿಕಿತ್ಸಾ ವಿಧಾನದಲ್ಲಿ ನೂರಾರು ವಿಭಿನ್ನಕೋನಗಳಿಂದ ಪ್ರಯೋಗಿಸುವ ಗ್ಯಾಮವಿಕಿರಣ ದೂಲಗಳು ಗಂತಿಯ ನಿರ್ದಿಷ್ಟ ಸ್ಥಳದಲ್ಲಿ ಬಲು ನಿಖರವಾಗಿ ಕೇಂದ್ರೀಕೃತವಾಗುತ್ತವೆ.

ತಲೆ ಹಾಗೂ ಕುತ್ತಿಗೆ, ಗರ್ಭಾಶಯ ಕಂಠ (ಸರ್ವಿಕ್ಸ್), ಗರ್ಭಾಶಯ, ಪ್ರಾಸ್ಟೇಟ್ ಗ್ರಂಥಿ ಚರ್ಮಸಂಬಂಧೀ ಕ್ಯಾನ್ಸರ್‍ಗಳಿಗೆ ಸಾಮಾನ್ಯವಾಗಿ ಆಂತರಿಕ ರೇಡಿಯೊಚಿಕಿತ್ಸೆ ಉಪಯುಕ್ತ. ಯುಕ್ತ ವಿಕಿರಣಪಟು  ಘನವಸ್ತುವನ್ನು ಗಂತಿಯ ಸಮೀಪದಲ್ಲಿ ಅಥವಾ ಒಳಗೆ ಇಡುವುದು; ವಿಕರಣಪಟು ದ್ರವವನ್ನು ಕುಡಿಸುವುದು ಅಥವಾ ಅಭಿಧಮನಿಯೊಳಕ್ಕೆ ಚುಚ್ಚಿಹೊಗಿಸುವುದು - ಇವೆರಡರಲ್ಲಿ ಯುಕ್ತವಾದ ತಂತ್ರಮುಖೇನ ಚಿಕಿತ್ಸೆ ಮಾಡುವುದು ಈ ವಿಧಾನದ ವೈಶಿಷ್ಟ್ಯ. ಮೊದಲನೆಯ ತಂತ್ರಕ್ಕೆ ಹ್ರಸ್ವಚಿಕಿತ್ಸೆ (ಬ್ರ್ಯಾಕಿತೆರಪಿ) ಎಂದೂ ಎರಡನೆಯದಕ್ಕೆ ರೇಡಿಯೊಸಮಸ್ಥಾನಿ ಚಿಕಿತ್ಸೆ (ರೇಡಿಯೊಐಸೊಟೋಪ್ ಟ್ರೀಟ್‍ಮೆಂಟ್) ಎಂದೂ ಹೆಸರು. ಇತರರನ್ನು ಅನಾವಶ್ಯಕವಾಗಿ ವಿಕಿರಣಕ್ಕೆ ಒಡ್ಡುವುದನ್ನು ತಪ್ಪಿಸಲೋಸುಗ ಈ ಚಿಕಿತ್ಸಾವಿಧಾನಗಳಲ್ಲಿ ಅನೇಕ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಂತರಿಕ ರೇಡಿಯೊಚಿಕಿತ್ಸೆಯ ಪ್ರಮುಖ ತಂತ್ರಗಳ ಸಂಕ್ಷಿಪ್ತ ವಿವರಣೆಗಳು ಮುಂದೆ ಇವೆ.

ಸೀಸಿಯಮ್ ಒಳಸೇರಿಸುವಿಕೆ (ಇನ್ಸರ್ಶನ್): ಗರ್ಭಾಶಯ ಕಂಠ, ಗರ್ಭಾಶಯ ಮತ್ತು ಯೋನಿ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರದ ಬಳಕೆ. ಸೀಸಿಯಮ್-137 ಸಾಮಾನ್ಯವಾಗಿ ಬಳಸುವ ವಿಕಿರಣಾಕರ. ಗಂತಿಯ ಸಂಪರ್ಕದಲ್ಲಿ ವಿಕಿರಣಾಕರವನ್ನಿಡುವ ಸಲುವಾಗಿ ಅಪ್ಲಿಕೇಟರ್ ಎಂಬ ಸಾಧನವನ್ನು ಯೋನಿಯ ಮೂಲಕ ತೂರಿಸಿ ಅದರ ಮೂಲಕ ಅಗತ್ಯವಾದಾಗ ಯುಕ್ತ ಪ್ರಮಾಣದ ಸೀಸಿಯಮ್-137ನ್ನು ಪ್ರಯೋಗಿಸಲಾಗುತ್ತದೆ. ಮೂತ್ರವಿಸರ್ಜನೆಗೆ ಅಡಚಣೆಯಾಗದಂತೆ ತೂರುನಳಿಕೆಯನ್ನೂ ಅಳವಡಿಸಲಾಗುತ್ತದೆ. ಅಪ್ಲಿಕೇಟರ್ ಒಳಕ್ಕೆ ಸೀಸಿಯಮ್ ಹೊಗಿಸಲು ವಿಶಿಷ್ಟ ಯಂತ್ರಗಳ ಉಪಯೋಗವುಂಟು.

ಸೀಸಿಯಮ್ ಅಥವಾ ಇರಿಡಿಯಮ್ ನಾಟಿ (ಇಂಪ್ಲೇಂಟ್): ಬಾಯಿ, ತುಟಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರದ ಬಳಕೆ. ಪ್ರಾಸ್ಟೇಟ್ ಗ್ರಂಥಿಯ ಚಿಕ್ಕ ಗಂತಿಗಳ ಚಿಕಿತ್ಸೆಗೂ ಬಳಸುವುದುಂಟು. ಬಲು ಸೂಕ್ಮವಾದ ಸೂಜಿ ಅಥವಾ ಕೊಳವೆ ಮುಖೇನ ವಿಕಿರಣಾಕರವನ್ನು ಗಂತಿಗಳಲ್ಲಿ ನಾಟಿ ಮಾಡಲಾಗುತ್ತದೆ.

ವಿಕಿರಣಪಟು ಸಮಸ್ಥಾನಿಗಳು: ಬಾಯಿಯ ಮೂಲಕ ಅಥವಾ ಅಂತಃಅಭಿಧಮನಿ ಚುಚ್ಚುಮದ್ದು ಮುಖೇನ ದ್ರವರೂಪದಲ್ಲಿ ಇವುಗಳ ನೀಡಿಕೆ. ಉದಾ: ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೊಅಯೊಡೀನ್ ಪಾನೀಯ; ದ್ವಿತೀಯಕ ಅಸ್ಥಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡುವ ಚುಚ್ಚುಮದ್ದು.
	
ಈ ನಮೂನೆಯ ರೇಡಿಯೊಚಿಕಿತ್ಸೆಯಲ್ಲಿಯೂ ಪಾಶ್ರ್ವ ಪರಿಣಾಮಗಳಿವೆ.			
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ